ತುಂಬುರು-
ಕಶ್ಯಪ ಮುನಿಯಿಂದ ಅರಿಷ್ಟೆಯೆಂಬ ಪತ್ನಿಯಲ್ಲಿ ಜನಿಸಿದ ದೇವಗಂಧರ್ವರಲ್ಲಿ ಒಬ್ಬ. ಈತ ಒಮ್ಮೆ ಕುಬೇರನ ಬಳಿ ಹೋಗುತ್ತಿದ್ದ ರಂಭೆಯನ್ನು ನಡು ದಾರಿಯಲ್ಲಿ ತಡೆದು ಭೋಗಿಸಿದ. ಇದನ್ನು ತಿಳಿದ ಕುಬೇರ ಈತನಿಗೆ ರಾಕ್ಷಸಯೋನಿಯಲ್ಲಿ ಜನಿಸು ಎಂಬ ಶಾಪವಿತ್ತ. ಶಾಪದಿಂದ ಕಂಗೆಟ್ಟ ಗಂಧರ್ವ ಕುಬೇರನನ್ನು ಬೇಡಿಕೊಂಡ. ಮುಂದೆ ರಾಮ ಲಕ್ಷ್ಮಣರು ಸೀತಾ ಸಮೇತರಾಗಿ ಅರಣ್ಯಕ್ಕೆ ಬಂದಾಗ ಅವರನ್ನು ಅಡ್ಡಗಟ್ಟಿ ಸೀತೆಯನ್ನು ಅಪಹರಿಸಹೋಗಿ ರಾಮನಿಂದ ಹತನಾದಾಗ ಮೊದಲಿನ ರೂಪ ಬರುತ್ತದೆಂದು ಕುಬೇರ ಅನುಗ್ರಹಿಸಿದ. ತುಂಬುರು ವಿರಾಧನೆಂಬ ರಾಕ್ಷಸನಾಗಿ ಹುಟ್ಟಿ ರಾಮನಿಂದ ಹತನಾಗಿ ಶಾಪ ವಿಮೋಚನೆ ಪಡೆದ. ಈ ಉಲ್ಲೇಖ ರಾಮಾಯಣದಲ್ಲಿ ಸಿಗುತ್ತದೆ. 

	ಮಹಾಭಾರತದಲ್ಲಿ ಈತ ಪ್ರಭ ಎಂಬುವನ ಮಗ. ಕುಬೇರನ ಆಸ್ಥಾನದಲ್ಲಿದ್ದ ಗಂಧರ್ವ ಮುಖ್ಯಸ್ಥರಲ್ಲಿ ಒಬ್ಬ ಎಂದು ಹೇಳಲಾಗಿದೆ. 

ಸೂರ್ಯನ ಏಳು ಜನ ರಥಪಾಲಕರಲ್ಲಿ ಒಬ್ಬ ಗಂಧರ್ವನ ಹೆಸರೂ ತುಂಬುರು ಎಂದಿದೆ.
(ಕೆ.ಆರ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ